ಕಂಠೀರಾವ್ : 1926-. ಕರ್ನಾಟಕ ರಾಜಭಾಷಾ ಆಯೋಗದ ಅಧ್ಯಕ್ಷರು. ಕನ್ನಡ ಕಾನೂನು ಸಾಹಿತ್ಯ ಲೇಖಕರು. ಬಹು ಭಾಷಾ ವಿಶಾರದರು. ಇವರು ರಾಯಚೂರು ಜಿಲ್ಲೆ ಗುಡುಗುಂಟೆ ಸಂಸ್ಥಾನದ ಜಹಗೀರದಾರರ ಮನೆತನಕ್ಕೆ ಸೇರಿದವರು. 1926ರಲ್ಲಿ ಜನಿಸಿದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದರು. ಕರ್ನಾಟಕ ರಾಜ್ಯದ ಭಾಷಾಂತರ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿ ಅದರ ನಿರ್ದೇಶಕರಾಗಿ ನಿವೃತ್ತರಾದರು. ಆಡಳಿತ ಪದಕೋಶ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಇವರು ಅನಂತರ ರಾಜಭಾಷಾ ಆಯೋಗದ ಅಧ್ಯಕ್ಷರೂ ಆದರು.

ಕಾನೂನು ಮತ್ತು ಆಡಳಿತ ವ್ಯವಸ್ಥೆಗೆ ಸಂಬಂದಿsಸಿದಂತೆ ಕನ್ನಡದಲ್ಲಿ 16ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ಭಾರತೀಯ ನ್ಯಾಯ ಪದ್ಧತಿ, ಮಕ್ಕಳು ಮತ್ತು ಕಾನೂನು ಎಂಬ ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಗಳು ಬಂದಿವೆ. ಆಡಳಿತ ವಿಷಯ ಪಾರಿಭಾಷಿಕ, ಇಸ್ಲಾಮೀನ್ಯಾಯ, ಕಾನೂನು ಭಾಷೆ-ಭಾಷಾಂತರ ಸಮಸ್ಯೆ, ನ್ಯಾಯ ನಿಬಂಧನೆ - ಇವರ ಇತರ ಮುಖ್ಯ ಕೃತಿಗಳು. ಆಡಳಿತ ಸಂಬಂದಿsಯಾದ ಶುಷ್ಕ ಭಾಷಿಕ ವಿಚಾರವನ್ನೂ ಹಿತವಾಗಿ ಹೃದ್ಯವಾಗಿ ಬರೆಯುವ ಕಲೆ ಇವರಿಗೆ ಸಿದ್ಧಿಸಿತ್ತು. ಇಂಗ್ಲಿಷ್, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಆಳವಾದ ಜ್ಞಾನ ಹೊಂದಿದ್ದ ಇವರು ಭಾರತೀಯ ಕಾನೂನಿನ ತಳಹದಿಯಾದ ಸಂಸ್ಕೃತ ಕೃತಿಗಳ ಸಾರವನ್ನು ಮನಮುಟ್ಟುವಂತೆ ನಿರೂಪಿಸುವ ಮತ್ತು ವಿಶ್ಲೇಷಿಸುವ ವಿಶೇಷ ಪಾಂಡಿತ್ಯ ಮತ್ತು ಸಾಮಥರ್ಯ್‌ವನ್ನು ಪಡೆದಿದ್ದರು. ಉತ್ತಮ ವಾಗ್ಮಿಯಾಗಿದ್ದ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರಗೋಷಿವಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ವಿದ್ವಜ್ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಜ್ಯದ ಭಾಷಾಂತರ ನಿರ್ದೇಶನಾಲಯದ ರೂವಾರಿಯಾಗಿದ್ದ ಇವರನ್ನು ವಿ.ಕೃ.ಗೋಕಾಕರು ಕನ್ನಡ ಕಾನೂನು ಆಚಾರ್ಯ ಎಂದು ಕರೆದಿದ್ದಾರೆ. ಸೇವೆಯಿಂದ ನಿವೃತ್ತರಾದ ಮೇಲೂ ಇವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗಾಗಿ ಹಲವು ಭಾಷಾಂತರ ಕಾರ್ಯಗಳಲ್ಲಿ ತೊಡಗಿದ್ದರು. ಇವರು ನಿವೃತ್ತಿಯ ಅನಂತರ  ಹೆಚ್ಚುಕಾಲ ಬದುಕಲಿಲ್ಲ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ